ವಿ. ಸೋಮಣ್ಣ ಸಭೆ


ಕರ್ನಾಟಕದಲ್ಲಿ ಒಟ್ಟು 50,000 ಕೋಟಿ ರೂಪಾಯಿಗಳಿಗೂ  ಅಧಿಕ ಮೌಲ್ಯದ ರೈಲ್ವೆ ಮೂಲಸೌಕರ್ಯ ಯೋಜನೆಗಳು ಪ್ರಸ್ತುತ ಪ್ರಗತಿಯಲ್ಲಿವೆ ಎಂದು ಹೇಳಿದರು. 

ಬೆಂಗಳೂರು: ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರ  ಅಧ್ಯಕ್ಷತೆಯಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನ ರೈಲ್ವೆ ಮೂಲಸೌಕರ್ಯ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಶನಿವಾರ ನಡೆಯಿತು

ಬೆಂಗಳೂರು ರೈಲ್ವೆ ಟರ್ಮಿನಲ್‌ಗಳ ದಟ್ಟಣೆಯನ್ನು ಕಡಿಮೆ ಮಾಡಲು,  ಪ್ರಯಾಣಿಕರ ಅನುಕೂಲತೆಯನ್ನು ಸುಧಾರಿಸಲು ಮತ್ತು ಸುರಕ್ಷತೆಗೆ ಸಂಬಂಧಿಸಿದ ಕೆಲಸಗಳನ್ನು ತ್ವರಿತಗೊಳಿಸಲು ಕೈಗೊಳ್ಳಲಾಗುತ್ತಿರುವ ಹಲವಾರು ಯೋಜನೆಗಳ ಕುರಿತು ಬೆಂಗಳೂರು ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದರು.

ಬೆಂಗಳೂರಿನ 100 ಕಿಮೀ ವ್ಯಾಪ್ತಿಯೊಳಗೆ ಲೆವೆಲ್ ಕ್ರಾಸಿಂಗ್ ಗೇಟ್‌ಗಳ ಬದಲಿಗೆ ರಸ್ತೆ ಮೇಲ್ಸೇತುವೆ (ಆರ್‌ಒಬಿ) ಅಥವಾ  ರಸ್ತೆ ಕೆಳ ಸೇತುವೆಗಳ (ಆರ್‌ಯುಬಿ) ನಿರ್ಮಾಣದ ಪ್ರಗತಿಯ ಕುರಿತು ಸನ್ಮಾನ್ಯ ಸಚಿವರು ಪರಿಶೀಲಿಸಿದರು.

ಭೂಸ್ವಾಧೀನ ಮತ್ತು ಇಲಾಖೆಗಳ ನಡುವಿನ ಸಮನ್ವಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ಚರ್ಚಿಸಲಾಯಿತು. ಯೋಜನೆಗಳನ್ನು ಸಕಾಲಿಕವಾಗಿ ಕಾರ್ಯಗತಗೊಳಿಸಲು ಎಲ್ಲಾ ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಗೆ ನಿಕಟ ಸಮನ್ವಯದಿಂದ ಕೆಲಸ ಮಾಡುವಂತೆ ಸಚಿವರು ಸಲಹೆ ನೀಡಿದರು. ಕಾಮಗಾರಿಗಳ ಗುಣಮಟ್ಟ ಖಾತರಿ ಪಡಿಸಿಕೊಳ್ಳಬೇಕು, ಅಂಡರ್‌ಪಾಸ್‌ಗಳಲ್ಲಿ ಬೆಳಕಿನ ಸೌಲಭ್ಯ ಒದಗಿಸಬೇಕೆಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಯಲಹಂಕದಲ್ಲಿ ಪ್ರಸ್ತಾವಿತ ಮೆಗಾ ಕೋಚಿಂಗ್ ಟರ್ಮಿನಲ್ ನಿರ್ಮಾಣ ಯೋಜನೆಯ ಕುರಿತು ಚರ್ಚಿಸಲಾಯಿತು.  

ನಂತರ, ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ವಿ. ಸೋಮಣ್ಣ, ಬೆಂಗಳೂರಿನ 100 ಕಿ.ಮೀ. ವ್ಯಾಪ್ತಿಯಲ್ಲಿ ಸುಮಾರು 100 ಲೆವೆಲ್ ಕ್ರಾಸಿಂಗ್ ಗೇಟ್‌ಗಳಿವೆ.  ಅದರಲ್ಲಿ,  46 ಲೆವೆಲ್ ಕ್ರಾಸಿಂಗ್ ಗೇಟ್‌ಗಳಿಗೆ ರಸ್ತೆ ಮೇಲ್ಸೇತುವೆ/ಕೆಳಸೇತುವೆಗಳನ್ನು ಈಗಾಗಲೇ ಮಂಜೂರು ಮಾಡಲಾಗಿದೆ, ಇನ್ನೂ 24 ಲೆವೆಲ್ ಕ್ರಾಸಿಂಗ್ ಗೇಟ್‌ಗಳನ್ನು ತೆಗೆದುಹಾಕಲು ಆರ್‌.ಓ.ಬಿ./ಆರ್.ಯು.ಬಿ. ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧ ಪಡಿಸಲಾಗುತ್ತಿದೆ ಮತ್ತು ಉಳಿದ  ಗೇಟ್‌ ಗಳಿಗೂ ಸಹಾ ಪ್ರಸ್ತಾವನೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. 

ರಸ್ತೆ ಮೇಲ್ಸೇತುವೆ/ಕೆಳಸೇತುವೆಗಳ ನಿರ್ಮಾಣದ ಮೂಲಕ ಲೆವೆಲ್ ಕ್ರಾಸಿಂಗ್ ಗೇಟ್‌ಗಳನ್ನು ತೆಗೆದುಹಾಕುವುದರಿಂದ ಸುರಕ್ಷತೆ ಹೆಚ್ಚಾಗುವುದು ಮಾತ್ರವಲ್ಲದೆ ಸುಗಮ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ. ಯಲಹಂಕದಲ್ಲಿ ಮೆಗಾ ಕೋಚಿಂಗ್ ಟರ್ಮಿನಲ್ ಅನ್ನು ಅಭಿವೃದ್ಧಿಪಡಿಸಲಾಗುತ್ತದೆ. ರಾಮೋಹಳ್ಳಿ ಎಲ್‌ಸಿ ಸಂಖ್ಯೆ 16 ರಲ್ಲಿ ರಸ್ತೆ ಕೆಳ ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು ಜೂನ್ 30, 2026 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ ಒಟ್ಟು 50,000 ಕೋಟಿ ರೂಪಾಯಿಗಳಿಗೂ  ಅಧಿಕ ಮೌಲ್ಯದ ರೈಲ್ವೆ ಮೂಲಸೌಕರ್ಯ ಯೋಜನೆಗಳು ಪ್ರಸ್ತುತ ಪ್ರಗತಿಯಲ್ಲಿವೆ ಎಂದು ಹೇಳಿದರು. ತುಮಕೂರು-ಬೆಂಗಳೂರು ಚತುಷ್ಪಥ ಹಳಿ  ಕಾಮಗಾರಿಯನ್ನು  ಕೈಗೆತ್ತಿಕೊಳ್ಳಲಾಗುವುದು.  ಹಾಗೆಯೇ ಬೆಂಗಳೂರು ಮತ್ತು ಕೋಲಾರ ನಡುವೆ ನೇರ ರೈಲು ಮಾರ್ಗಕ್ಕೂ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಸಾರ್ವಜನಿಕರ ಬಹುದಿನಗಳ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಎಸ್‌ಎಂವಿಟಿ ಬೆಂಗಳೂರು ಮತ್ತು ಲೋಕಮಾನ್ಯ ತಿಲಕ್ ಟರ್ಮಿನಸ್, ಮುಂಬೈ ನಡುವೆ ಹೊಸ ದ್ವೈ-ಸಾಪ್ತಾಹಿಕ ಎಕ್ಸ್‌ ಪ್ರೆಸ್‌  ರೈಲು  ಸೇವೆಗೆ  ಕೇಂದ್ರ ರೈಲ್ವೆ ಸಚಿವರಾದ  ಅಶ್ವಿನಿ ವೈಷ್ಣವ್ ಅವರು 17.05.2026 ರಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

#karnataka #RailwayInfrastructureProjects #vsomanna #meeting #ರಾಜ್ಯ #ರೈಲ್ವೆಮೂಲಸೌಕರ್ಯ ಯೋಜನೆ #ವಿಸೋಮಣ್ಣ #ಸಭೆ

Leave a Reply

Your email address will not be published. Required fields are marked *

  • Facebook
  • X (Twitter)
  • LinkedIn
  • More Networks
Copy link