ಪದ್ಮಶ್ರೀ ಪುರಸ್ಕೃತ ಅಂಕೇಗೌಡ ಅವರನ್ನು ಸನ್ಮಾನಿಸಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ


ಪುಸ್ತಕ ಮನೆ ಅಭಿವೃದ್ಧಿ ಬಗ್ಗೆ ಮುಖ್ಯವಾಗಿ ಚರ್ಚಿಸಿದ ಸಚಿವರು, ಬಗ್ಗೆ ಆಗಬೇಕಿರುವ ಕೆಲಸಗಳ ಬಗ್ಗೆ ಅಂಕೇಗೌಡರಿಂದ ಮಾಹಿತಿ ಪಡೆದುಕೊಂಡರು. ಗೌಡರ ಸಾಧನೆ ಬಗ್ಗೆ ಮತ್ತು ಅವರ ಪುಸ್ತಕ ಪ್ರೀತಿಯ ಮೆಚ್ಚುಗೆ ವ್ಯಕ್ತಪಡಿಸಿದರು.

ಅಂಕೇಗೌಡ ಅವರನ್ನು ಗೌರವಿಸಿದ ಹೆಚ್ ಡಿ ಕುಮಾರಸ್ವಾಮಿ

ನವದೆಹಲಿ: ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಮಂಗಳವಾರ ಬೆಳಗ್ಗೆ ಪದ್ಮಶ್ರೀ ಪುರಸ್ಕೃತರಾದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ‘ಪುಸ್ತಕ ಮನೆ’ ರುವಾರಿ ಎಂ. ಅಂಕೇಗೌಡರನ್ನು ತಮ್ಮ ನಿವಾಸಕ್ಕೆ ಬರಮಾಡಿಕೊಂಡು ಅತ್ಯಂತ ಆತ್ಮೀಯವಾಗಿ ಗೌರವಿಸಿದರು.

ಸೋಮವಾರ ರಾಷ್ಟ್ರಪತಿ ಭವನದಲ್ಲಿ ಅಂಕೇಗೌಡ ಅವರು ರಾಷ್ಟ್ರಪತಿಗಳಾದ  ದ್ರೌಪದಿ ಮುರ್ಮು ಅವರಿಂದ ಪದ್ಮಶ್ರೀ ಪುರಸ್ಕಾರ ಸ್ವೀಕರಿಸುವ ಕ್ಷಣಕ್ಕೆ ಸಾಕ್ಷಿಯಾಗಿದ್ದ ಸಚಿವ ಕುಮಾರಸ್ವಾಮಿ ಅವರು, ಮಂಗಳವಾರ ಬೆಳಗ್ಗೆಯೇ ಅಂಕೇಗೌಡರನ್ನು ತಮ್ಮ ನಿವಾಸಕ್ಕೆ ಬರಮಾಡಿಕೊಂಡು ಸತ್ಕರಿಸಿದರು.

ಪುಸ್ತಕ ಮನೆ ಅಭಿವೃದ್ಧಿ ಬಗ್ಗೆ ಮುಖ್ಯವಾಗಿ ಚರ್ಚಿಸಿದ ಸಚಿವರು, ಬಗ್ಗೆ ಆಗಬೇಕಿರುವ ಕೆಲಸಗಳ ಬಗ್ಗೆ ಅಂಕೇಗೌಡರಿಂದ ಮಾಹಿತಿ ಪಡೆದುಕೊಂಡರು. ಗೌಡರ ಸಾಧನೆ ಬಗ್ಗೆ ಮತ್ತು ಅವರ ಪುಸ್ತಕ ಪ್ರೀತಿಯ ಮೆಚ್ಚುಗೆ ವ್ಯಕ್ತಪಡಿಸಿದರು.

‘ಪದ್ಮಶ್ರೀ’ ಪ್ರಶಸ್ತಿ ಸ್ವೀಕರಿಸಲು ಆಗಮಿಸಿದ್ದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಎಂ.ಅಂಕೇಗೌಡರು ನನ್ನ ನಿವಾಸಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರನ್ನು ಸತ್ಕರಿಸಿ ಗೌರವಿಸುವ ಭಾಗ್ಯ ನನ್ನದಾಯಿತು. ಅಂಕೇಗೌಡರ ಪುಸ್ತಕ ಪ್ರೇಮ ಅನನ್ಯ.  ಮುಂದಿನ ತಲೆಮಾರಿಗೂ ಓದಿನ ಪರಂಪರೆಯನ್ನು ಮುಂದುವರಿಸುವ ಅವರ ಅಚಲತೆ, ಕಾಳಜಿ ನಮಗೆಲ್ಲರಿಗೂ ಪ್ರೇರಣದಾಯಕ ಎಂದು ತಮ್ಮ ಹೇಳಿಕೆಯಲ್ಲಿ ಸಚಿವರು ತಿಳಿಸಿದ್ದಾರೆ.

ಕನ್ನಡ ಸಾಹಿತ್ಯ ಮಾತ್ರವಲ್ಲ ಜಗತ್ತಿನ ಅನೇಕ ಭಾಷೆಗಳ ಅನೇಕಾನೇಕ ಶ್ರೇಷ್ಠ ಕೃತಿಗಳು ಇವರ ಸಂಗ್ರಹದಲ್ಲಿವೆ. ಕನ್ನಡನಾಡಿನ ಹೆಮ್ಮೆ ಆಗಿರುವ ಶ್ರೀಯುತರಿಗೆ ಅವರ ‘ಪುಸ್ತಕ ಮನೆ’ಯನ್ನು ಉಳಿಸಿ ಮತ್ತು ಬೃಹತ್ ಆಗಿ ಬೆಳೆಸುವ ನಿಟ್ಟಿನಲ್ಲಿ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದೇನೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.  ಅಂಕೇಗೌಡರು ಪದ್ಮಶ್ರೀ ಪುರಸ್ಕಾರ ಸ್ವೀಕರಿಸಿದ ಕೂಡಲೇ ಅಭಿನಂದನೆ ಸಲ್ಲಿಸಿದ ಕುಮಾರಸ್ವಾಮಿ ಅವರು, ಗೌಡರ ಸಾಧನೆಯನ್ನು ಕೊಂಡಾಡಿದ್ದರು.

ರಾಷ್ಟ್ರದ ಗೌರವಾನ್ವಿತ ರಾಷ್ಟಪತಿಗಳಿಂದ ‘ಪದ್ಮಶ್ರೀ’ ಗೌರವ ಸ್ವೀಕರಿಸಿದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಎಂ. ಅಂಕೇಗೌಡರನ್ನು ಅತ್ಯಂತ ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ. ಸಾರ್ವಜನಿಕರಲ್ಲಿ, ಅದರಲ್ಲಿಯೂ ಬಹುಮುಖ್ಯವಾಗಿ ಯುವಜನರಲ್ಲಿ ಓದುವ ಹವ್ಯಾಸ ಬೆಳೆಸಲು ತಮ್ಮ ಬದುಕನ್ನೇ ಮೀಸಲಿಟ್ಟಿರುವ ಅಂಕೇಗೌಡರು ಕನ್ನಡನಾಡು ಹೆಮ್ಮೆಪಡುವಂತಹ ಕಾಯಕ ಮಾಡುತ್ತಿದ್ದಾರೆ. ‘ಪುಸ್ತಕ ಮನೆ’ ಸ್ಥಾಪಿಸಿ ಕಳೆದ ಐದು ದಶಕಗಳಲ್ಲಿ ಸುಮಾರು 29 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿ, ಪುಸ್ತಕ ಮತ್ತು ಓದುವ ಪರಂಪರೆಗೆ ಅತಿ ದೊಡ್ಡ ಕೊಡುಗೆ ನೀಡಿದ್ದಾರೆ. ವೈಯಕ್ತಿಕವಾಗಿ ಹಾಗೂ ಮಂಡ್ಯ ಜಿಲ್ಲೆಯ ಜನತೆ, ಸಮಸ್ತ ಕನ್ನಡಿಗರ ಪರವಾಗಿ ಅಂಕೇಗೌಡರಿಗೆ ಮತ್ತೊಮ್ಮೆ ಅಭಿನಂದಿಸುತ್ತೇನೆ ಎಂದು ಹೇಳಿದ್ದರು.

#newdelhi #Padma Shri awardee #Ankegauda #HDkumaraswamy #ನವದೆಹಲಿ#ಪದ್ಮಶ್ರೀ ಪುರಸ್ಕೃತ #ಅಂಕೇಗೌಡ

Leave a Reply

Your email address will not be published. Required fields are marked *