ಸಾಂದರ್ಭಿಕ ಚಿತ್ರ


ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೇವಲ ಊಹಾಪೋಹ, ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆ ಸಂಬಂಧ ಚರ್ಚೆ ನಡೆದಿರುವುದಾಗಿ ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಪಪಡಿಸಿದೆ.

ಸಿಎಂ ಸಿದ್ದರಾಮಯ್ಯ, ಕೆಸಿ ವೇಣುಗೋಪಾಲ್, ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿದ್ದ ಮೇಕ್ರಾಂತಿ ನಿರೀಕ್ಷೆ ಹುಸಿಯಾಗಿದೆ. ಸಿಎಂ ಹುದ್ದೆ ಬದಲಾವಣೆ ಕುರಿತು ಎದ್ದಿದ್ದ ಊಹಾಪೋಹಗಳಿಗೆ ಕಾಂಗ್ರೆಸ್ ಹೈಕಮಾಂಡ್ ಮಂಗಳವಾರ ತೆರೆ ಎಳೆದಿದೆ.ರಾಜ್ಯದಲ್ಲಿ ಸಿಎಂ ಬದಲಾವಣೆ ಎಂಬುದು ಕೇವಲ ಊಹಾಪೋಹ. ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆ ಸಂಬಂಧ ಚರ್ಚೆ ನಡೆದಿರುವುದಾಗಿ ಹೈಕಮಾಂಡ್ ಹೇಳಿದೆ.

ದೆಹಲಿಯ ಇಂದಿರಾ ಭವನದಲ್ಲಿ ರಾಹುಲ್ ಗಾಂಧಿ ಹಾಗೂ ಸಿಎಂ ಸಿದ್ದರಾಮಯ್ಯ ನಡುವೆ ಪ್ರತ್ಯೇಕ ಸಭೆ ನಡೆದಿದೆ. ಸುಮಾರು 45 ನಿಮಿಷಗಳ ಕಾಲ ಉಭಯ ನಾಯಕರ ಸಭೆ ನಡೆದಿದ್ದು, ಈ ವೇಳೆ ನಾಯಕತ್ವ ಬದಲಾವಣೆ ಬಗ್ಗೆ ಗಂಭೀರ ಚರ್ಚೆಯಾಗಿದೆ. ಇನ್ನು ಸಾಧಕ-ಬಾಧಕಗಳ ಬಗ್ಗೆಯೂ ಸಹ ಸಿದ್ದರಾಮಯ್ಯನವರು, ರಾಹುಲ್ ಗಾಂಧಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

6 ಗಂಟೆಗಳ ಮ್ಯಾರಥಾನ್‌ ಸಭೆಯ ಬಳಿಕ ಸಂಜೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು, ಸಭೆಯಲ್ಲಿ ಕೇವಲ ಮುಂಬರುವ ಚುನಾವಣೆಗಳ ಬಗ್ಗೆ ಮಾತ್ರ ಚರ್ಚಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇಂದು ನಾವು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ವಿವರವಾದ ಸಭೆ ನಡೆಸಿದ್ದೇವೆ. ಈ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕರ್ನಾಟಕದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಮತ್ತು ನಾನು ಭಾಗವಹಿಸಿದ್ದೇವು.

ಇಂದು ಇಡೀ ಚರ್ಚೆಯು ಮುಂಬರುವ ರಾಜ್ಯಸಭಾ ಚುನಾವಣೆ ಮತ್ತು ಕರ್ನಾಟಕದ ವಿಧಾನ ಪರಿಷತ್ ಚುನಾವಣೆಗಳ ಮೇಲೆ ಮಾತ್ರ ಕೇಂದ್ರೀಕೃತವಾಗಿತ್ತು. ನೀವು ಏನೇ ಊಹಾಪೋಹ ಮಾಡುತ್ತಿದ್ದರೂ ಅದು ಕೇವಲ ಊಹಾಪೋಹ. ವಾಸ್ತವವೇ ಬೇರೆ. ಇಂದು ನಾವು ಕರ್ನಾಟಕದ ರಾಜ್ಯಸಭಾ ಸ್ಥಾನಗಳು ಮತ್ತು ಪರಿಷತ್ ಸ್ಥಾನಗಳ ಬಗ್ಗೆ ಚರ್ಚಿಸಿದ್ದೇವೆ. ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಜಾರ್ಖಂಡ್‌ನಂತಹ ಇತರ ಸ್ಥಾನಗಳ ಜೊತೆಗೆ ಕರ್ನಾಟಕದ ರಾಜ್ಯಸಭಾ ಮತ್ತು ಪರಿಷತ್ ಸ್ಥಾನಗಳ ಅಭ್ಯರ್ಥಿಗಳನ್ನು ಶೀಘ್ರ ಘೋಷಿಸಲಾಗುವುದು. ಇಂದು ನಾವು ನಿರ್ಧರಿಸಿದ್ದು ಇದನ್ನೇ, ಬೇರೆ ಯಾವುದೇ ವಿಚಾರ ಚರ್ಚೆ ಬಂದಿಲ್ಲ ಎಂದು ವೇಣುಗೋಪಾಲ್ ಸ್ಪಷ್ಟಪಡಿಸಿದರು.

ಇದರೊಂದಿಗೆ ಅಧಿಕಾರ ಹಂಚಿಕೆ ಸೂತ್ರದಂತೆ ಮುಖ್ಯಮಂತ್ರಿ ಹುದ್ದೆ ಸಿಗಲಿದೆ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಅವರ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿದ್ದು, ಅವರ ಮುಂದಿನ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. 

#karnataka #Leadershipchange #congresshicommand #meeting #ಕರ್ನಾಟಕ #ನಾಯಕತ್ವ ಬದಲಾವಣೆ #ಕಾಂಗ್ರೆಸ್ ಹೈಕಮಾಂಡ್ #ಸಭೆ

Leave a Reply

Your email address will not be published. Required fields are marked *