ಇತ್ತೀಚಿನ ಆಹಾರ ಪದ್ಧತಿ, ಕಲುಷಿತ ವಾತಾವರಣ, ಒತ್ತಡದ ಜೀವನ ಮನುಷ್ಯನ ಜೀವನ ಚಕ್ರವನ್ನ ಬದಲಿಸುತ್ತಾ ಇದೆ. ಸಕ್ಕರೆ ಕಾಯಿಲೆ (ಮಧುಮೇಹ), ರಕ್ತದೊತ್ತಡ (ಬಿಪಿ), ಕ್ಯಾನ್ಸರ್, ಶ್ವಾಸಕೋಶ ಸೋಂಕು, PCOD ರೀತಿಯ ನಾನಾ ಆರೋಗ್ಯ ಸಮಸ್ಯೆಗಳು ಹೆಚ್ಚಾಗತ್ತಿದೆ. ಕೆಲ ಕಾಯಿಲೆಗಳು ಎಷ್ಟೇ ಮೆಡಿಸಿನ್ ತೆಗೆದುಕೊಂಡರೂ ಸಾಯುವವರೆಗೂ ಬಾಧೆ ಅನುಭವಿಸಬೇಕಾದ ಪರಿಸ್ಥಿತಿ ಬಂದಿದೆ

ಆರೋಗ್ಯವೇ ಮಹಾಭಾಗ್ಯ.. ಈಗಿನ ಕಾಲದಲ್ಲಿ ಆರೋಗ್ಯ ಒಂದಿದ್ದರೆ ಸಾಕು ನೆಮ್ಮದಿ, ಸಂತೋಷ, ಹಣ ಎಲ್ಲಾ ಜೊತೆಯಲ್ಲೇ ಇದ್ದಂಗೆ ಅನ್ನೋ ಮನೋಭಾವನೆ ಹುಟ್ಟುಕೊಂಡಿದೆ. ಎಷ್ಟೇ ದುಡ್ಡಿದ್ದರೂ ಆರೋಗ್ಯವಿಲ್ಲದೆ ಹಲವು ಕಾಯಿಲೆಗಳಿಂದ ಬಳಲುತ್ತಿರೋರನ್ನ ನೋಡುತ್ತಲೇ ಇದ್ದೀವಿ. ಇತ್ತೀಚಿನ ಆಹಾರ ಪದ್ಧತಿ, ಕಲುಷಿತ ವಾತಾವರಣ, ಒತ್ತಡದ ಜೀವನ ಮನುಷ್ಯನ ಜೀವನ ಚಕ್ರವನ್ನ ಬದಲಿಸುತ್ತಾ ಇದೆ. ಸಕ್ಕರೆ ಕಾಯಿಲೆ (ಮಧುಮೇಹ), ರಕ್ತದೊತ್ತಡ (ಬಿಪಿ), ಕ್ಯಾನ್ಸರ್, ಶ್ವಾಸಕೋಶ ಸೋಂಕು, PCOD ರೀತಿಯ ನಾನಾ ಆರೋಗ್ಯ ಸಮಸ್ಯೆಗಳು ಹೆಚ್ಚಾಗತ್ತಿದೆ. ಕೆಲ ಕಾಯಿಲೆಗಳು ಎಷ್ಟೇ ಮೆಡಿಸಿನ್ ತೆಗೆದುಕೊಂಡರೂ ಸಾಯುವವರೆಗೂ ಬಾಧೆ ಅನುಭವಿಸಬೇಕಾದ ಪರಿಸ್ಥಿತಿ ಬಂದಿದೆ.
ನಮ್ಮ ಆರೋಗ್ಯ ನಮ್ಮ ಕೈನಲ್ಲೇ ಇದೆ. ಹಿಂದಿನ ಕಾಲದಲ್ಲಿದ್ದ ಆಹಾರ ಪದ್ಧತಿ ಈಗಿನ ಆಧುನಿಕ ಕಾಲಕ್ಕೆ ಇಲ್ಲದಿದ್ದರೂ ಕೆಲ ಆಹಾರಗಳಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ತಿನ್ನುವುದರಿಂದ ನಮ್ಮ ಆರೋಗ್ಯ ಚೆನ್ನಾಗಿರುತ್ತೆ ಎಂದರೆ ನಂಬಲೇಬೇಕಾದ ಮಾತು. ಹೌದು, ನಾವು ದಿನನಿತ್ಯ ಅಡುಗೆಗೆ ತರಕಾರಿ ಬಳಸಿ ಸೇವಿಸುತ್ತೇವೆ. ಇದರಿಂದ ದೇಹಕ್ಕೆ ಅಗತ್ಯವಿರುವ ಪೌಷ್ಠಿಕಾಂಶಗಳು ದೊರೆಯುತ್ತದೆ. ಅದೇ ರೀತಿ ನಮ್ಮ ದೇಹಾರೋಗ್ಯಕ್ಕೆ ಹಣ್ಣುಗಳ ಸೇವನೆಯೂ ಇರಲೇಬೇಕು. ಹಣ್ಣುಗಳಲ್ಲಿ ಪ್ರೊಟೀನ್, ವಿಟಮಿನ್, ಸಿಟ್ರಸ್, ಖನಿಜಾಂಶಗಳು ಸೇರಿದಂತೆ ನಮ್ಮ ದೇಹಕ್ಕೆ ಬೇಕಾದ ಎಲ್ಲಾ ಅಂಶಗಳು ದೊರೆಯುತ್ತದೆ. ಅದರಲ್ಲೂ ಕೆಲ ಹಣ್ಣುಗಳಂತೂ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ.
ಆರೋಗ್ಯ ಸಂಜೀವಿನಿ ನೇರಳೆಹಣ್ಣು
ಬೇಸಿಗೆ ಮುಗಿಯುತ್ತಾ ಮಳೆಗಾಲ ಆರಂಭದಲ್ಲಿ ಮಾರುಕಟ್ಟೆಗಳಲ್ಲಿ ಆಕರ್ಷಕವಾಗಿ ಕಾಣ ಸಿಗುವ ಒಂದು ಚಮತ್ಕಾರಿ ಹಣ್ಣು ಎಷ್ಟೋ ಆರೋಗ್ಯ ಸಮಸ್ಯೆಗಳು ದೂರ ಮಾಡುತ್ತದೆ. ಅದುವೇ ನೇರಳೆ ಹಣ್ಣು. ಇದನ್ನು ದೇವರ ಹಣ್ಣು, ಕಾಲೋಚಿತ ಹಣ್ಣು, ಜಾಮುನ್, ಜಾವಾ ಪ್ಲಮ್ ಎಂಬ ಹೆಸರುಗಳಿಂದ ಕರೆಯುತ್ತಾರೆ. ಹೆಸರೇ ಹೇಳುವಂತೆ ನೇರಳೆ ಬಣ್ಣದಲ್ಲಿದ್ದು, ಸ್ವಲ್ಪ ಸಿಹಿ, ಸ್ವಲ್ಪ ಒಗರು ನಾಲಗೆಗೆ ವಿಭಿನ್ನ ರುಚಿ ಜೊತೆ ಪೌಷ್ಠಿಕಾಂಶ ನೀಡುವ ದೇವರ ಹಣ್ಣು. ಚಿಕ್ಕ ನಿಂಬೆಹಣ್ಣಿನ ಗಾತ್ರದಲ್ಲಿ, ಸ್ವಲ್ಪ ಗೋಳಾಕಾರದಲ್ಲಿ ಕಾಣುವ ಈ ಪುಟ್ಟ ಹಣ್ಣಿಗೆ ಆಯುರ್ವೇದದಲ್ಲೂ ಹೆಚ್ಚು ಮಹತ್ವವಿದೆ. ನೇರಳೆ ಹಣ್ಣು ಎಷ್ಟೋ ಕಾಯಿಲೆಗಳಿಗೆ ರಾಮಬಾಣವಾಗಿ ಉಪಯೋಗಿಸಲಾಗುತ್ತದೆ.
ನೇರಳೆ ಹಣ್ಣು ಯಾಕೆ ತಿನ್ನಬೇಕು?
ಪ್ರಕೃತಿಯಲ್ಲಿ ಸಿಗುವ ಆರೋಗ್ಯ ನೀಡುವ ಸಂಜೀವಿನಿ ಹಣ್ಣುಗಳಲ್ಲಿ ನೇರಳೆ ಹಣ್ಣು ಮುಖ್ಯವಾದದ್ದು. ಈ ಒಂದು ಹಣ್ಣಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿದೆ. ವಿಟಮಿನ್ ಸಿ, ಆಂಟಿಆಕ್ಸಿಡೆಂಟ್ ಹೆಚ್ಚಿದ್ದು ಅಜೀರ್ಣ, ಗ್ಯಾಸ್ಟ್ರಿಕ್, ಉರಿಯೂತ, ಹೊಟ್ಟೆಯ ಹಲವು ಸಮಸ್ಯೆಗಳಿಗೆ ಮದ್ದಾಗಿ ಕೆಲಸ ಮಾಡುತ್ತದೆ. ಹಾಗೇ ನೇರಳೆ ಹಣ್ಣಿನಲ್ಲಿರೋ ನಾರಿನಾಂಶ ಮಲಬದ್ಧತೆಯನ್ನು ದೂರ ಮಾಡುತ್ತದೆ. ಇನ್ನು ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂಬುವವರಿಗೆ ಈ ಹಣ್ಣು ತುಂಬಾ ಪ್ರಯೋಜನಕಾರಿ. ಯಾಕೆಂದರೆ ಈ ಹಣ್ಣಲ್ಲಿ ನಾರಿನಾಂಶ ಹೆಚ್ಚಿದ್ದು, ಕ್ಯಾಲೋರಿ ಪ್ರಮಾಣ ಕಡಿಮೆ ಇದ್ದು, ಸೇವಿಸಿದಾಗ ಹೊಟ್ಟೆ ಬೇಗ ತುಂಬಿದ ಅನುಭವ ನೀಡುತ್ತದೆ. ಫೈಬರ್ ಅಂಶ ಹೇರಳವಾಗಿರುವುದರಿಂದ ರಕ್ತಪ್ರಮಾಣ ಹೆಚ್ಚಿಸುವ ಮೂಲಕ ರಕ್ತಶುದ್ದಿಯನ್ನು ಮಾಡುತ್ತದೆ.
ದೇವರಹಣ್ಣು ಮಧುಮೇಹಕ್ಕೆ ರಾಮಬಾಣ
ಸಕ್ಕರೆ ಕಾಯಿಲೆ, ಈಗಿನ ದಿನಗಳಲ್ಲಿ 100ರಲ್ಲಿ 30ಕ್ಕಿಂತ ಹೆಚ್ಚು ಮಂದಿಗೆ ಇರುವ ಆರೋಗ್ಯ ಸಮಸ್ಯೆ. ಒಂದು ಬಾರಿ ಸಕ್ಕರೆ ಕಾಯಿಲೆ ಮೈನಲ್ಲಿ ಕಾಣಿಸಿಕೊಂಡರೆ ಮತ್ತೆ ಸಂಪೂರ್ಣವಾಗಿ ಗುಣವಾಗದ ಕಾಯಿಲೆ ಆಗೋಗಿದೆ. ಮಧುಮೇಹ ಇದ್ದವರಿಗೆ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದೇ ಹರಸಾಹಸ. ಏನೇ ತಿಂಡಿ, ತಿನಿಸು ಬಾಯಿಗಿಡಬೇಕಾದ್ರೂ ಹತ್ತಾರು ಬಾರಿ ಯೋಚಿಸಬೇಕಾದ ಸ್ಥಿತಿ. ಇಂತಹ ಸ್ಥಿತಿ ಎದುರಿಸದಂತೆ ರಾಮಬಾಣವಾಗಿ ನಿಲ್ಲುತ್ತೆ ಚಮತ್ಕಾರಿ ನೇರಳೆ ಹಣ್ಣು. ಇದನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣವಾಗುತ್ತದೆ ಹಾಗೂ ಸುಸ್ತು ಇಲ್ಲದೆ ಲವಲವಿಕೆಯಿಂದ ಇರುವಂತೆ ಮಾಡುತ್ತದೆ. ಅಷ್ಟೇಅಲ್ಲ ನೇರಳೆ ಹಣ್ಣಿನ ಬೀಜದಪುಡಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.
ತ್ವಚೆಯ ಕಾಂತಿ ಹೆಚ್ಚಿಸೋ ಸೂಪರ್ ಹಣ್ಣು
ತ್ವಚೆ ಫಳಫಳ ಅಂತ ಹೊಳಿಯುತ್ತಿರಬೇಕು ಅಂತ ಯಾರಿಗೆ ತಾನೇ ಅನ್ನಿಸೋದಿಲ್ಲ. ಕಲೆರಹಿತ, ಕಾಂತಿಯುಕ್ತ, ಲಕ್ಷಣವಾದ ಮುಖಕ್ಕೆ ಎಷ್ಟೋ ರೀತಿಯ ಸ್ಕಿನ್ ಕ್ರೀಮ್, ಲೋಷನ್, ಮಾಯ್ ಶ್ಚರೈಸರ್, ಫೇಶಿಯಲ್ ಮೊರೆ ಹೋಗುತ್ತೇವೆ. ಆದರೆ ನ್ಯಾಚುರಲ್ ಆಗಿ ಸಿಗುವ ನೇರಳೆ ಹಣ್ಣು ಚರ್ಮದ ಕಾಂತಿಯನ್ನು ದುಪ್ಪಟ್ಟು ಮಾಡುತ್ತದೆ. ನೇರಳೆಹಣ್ಣನ್ನು ತಿನ್ನುವುದರಿಂದ ಅದರಲ್ಲಿರುವ ಆಂಟಿಆಕ್ಸಿಡೆಂಟ್ ಒಳಗಿನಿಂದ ಡೆಡ್ ಸ್ಕಿನ್ ತೆಗೆದುಹಾಕಿ ಚರ್ಮದ ಕಾಂತಿ ಹೆಚ್ಚಿಸುತ್ತದೆ. ಹಾಗೇ ಹಣ್ಣಿನ ಬೀಜದ ಪುಡಿಯನ್ನು ರೋಸ್ ವಾಟರ್ ನಲ್ಲಿ ಬೆರೆಸಿ ಮುಖದ ಮೇಲಿನ ಕಪ್ಪು ಕಲೆ, ಮೊಡವೆಗಳ ಮೇಲೆ ಹಚ್ಚಿದರೆ ಬೇಗ ಸಮಸ್ಯೆಯಿಂದ ದೂರವಾಗಬಹುದು. ಇನ್ನು ಬಹುತೇಕ ಹೆಣ್ಣುಮಕ್ಕಳಿಗೆ ಕಾಡುವ ಎಣ್ಣೆಯುಕ್ತ ಚರ್ಮ ಅಂದರೆ OILY SKIN ಸಮಸ್ಯೆಗೆ ಬೇಗ ಮುಕ್ತಿ ಸಿಗುತ್ತದೆ.
ನೇರಳೆಹಣ್ಣು ಮಳೆಗಾಲ ಆರಂಭದಲ್ಲಿ ಹೇರಳವಾಗಿ ಮಾರುಕಟ್ಟೆಗಳಲ್ಲಿ ದೊರೆಯುತ್ತದೆ. ಪ್ರತಿ ಕೆ.ಜಿಗೆ 100 ರೂಪಾಯಿ ಇದ್ದು, ಪ್ರತಿದಿನ ಸ್ವಲ್ಪ ಪ್ರಮಾಣದಲ್ಲಿ ಸೇವಿಸುವುದರಿಂದ ಎಷ್ಟೋ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು. ಇನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದು, ಸೇವನೆ ನಂತರ ನೀರು ಕುಡಿಯುವುದು ಮಾಡಬಾರದು ಎಂದು ವೈದ್ಯರು ಸಲಹೆ ನೀಡುತ್ತಾರೆ.
ಪ್ರಕೃತಿಯಲ್ಲಿ ಸಿಗುವ ಪ್ರತಿ ಹಣ್ಣುಹಂಪಲುಗಳಲ್ಲಿ ನಮ್ಮ ಆರೋಗ್ಯವನ್ನು ಹೆಚ್ಚಿಸುವ ಅದ್ಭುತ ಶಕ್ತಿ ಇದೆ. ಅದರಲ್ಲೂ ಸೀಸನಲ್ ಫ್ರೂಟ್ಸ್ ಅನ್ನು ಯಾವುದೇ ಕಾರಣಕ್ಕೂ ಬಿಡದೆ ಸೇವಿಸಿ. ಯಾಕೆಂದರೆ ಆಯಾ ವಾತಾವರಣಕ್ಕೆ ಸಿಗುವ ಹಣ್ಣುಗಳು ನಮ್ಮ ಆರೋಗ್ಯವನ್ನು ವೃದ್ಧಿ ಮಾಡುತ್ತದೆ.

Leave a Reply

Your email address will not be published. Required fields are marked *

  • Facebook
  • X (Twitter)
  • LinkedIn
  • More Networks
Copy link