ಸಾಂದರ್ಭಿಕ ಚಿತ್ರ


1 ವರ್ಷದಿಂದ ಈಚೆಗೆ ಕೆಲ ಜನ ಈ ಮೊಬೈಲ್ ಅನ್ನುವ ಗೀಳಿನಿಂದ ಹೊರಬರಲು ತುಂಬಾ ಪ್ರಯತ್ನಿಸುತ್ತಿದ್ದಾರೆ. ಸ್ಕ್ರೀನ್ ಟೈಂ ಅನ್ನೋದು ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡುತ್ತಿದೆ ಎಂಬ ವಿಷಯದ ಬಗ್ಗೆ ಅರಿವಾಗಿದೆ. 

ಇತ್ತೀಚಿನ ದಿನಗಳಲ್ಲಿ ಮೂಲಭೂತ ಸೌಕರ್ಯಗಳಲ್ಲಿ ಫೋನ್ ಸಹ ಸೇರಿಕೊಂಡಿದೆ ಅಂದರೆ ತಪ್ಪಾಗಲಾರದು. ಪ್ರತಿ ವ್ಯಕ್ತಿ ಬಳಿಯೂ ಮೊಬೈಲ್ ಫೋನ್ ಇದ್ದೇ ಇರುತ್ತದೆ. ನನ್ನ ಬಳಿ ಫೋನ್ ಇಲ್ಲ ಅಂತ ಕೇಳಿ ಬರುವ ಮಾತು ಈಗ ಪ್ರಪಂಚದ 7ನೇ ಅದ್ಭುತದಂತೆ ಕಾಣಿಸುತ್ತದೆ. ಯಾಕೆಂದರೆ, ಕಳೆದ 10 ವರ್ಷಗಳಲ್ಲಿ ಮೊಬೈಲ್ ಫೋನ್ ಗಳ ಯಥೇಚ್ಛ ಬಳಕೆಯಿಂದ ಫೋನ್  ಇಲ್ಲದಿದ್ದರೆ ಬದುಕೋಕೆ ಅಸಾಧ್ಯ ಎನ್ನುವ ನಿಲುವಿಗೆ ಜನ ಬಂದು ಬಿಟ್ಟಿದ್ದಾರೆ. ಆದರೆ 1 ವರ್ಷದಿಂದ ಈಚೆಗೆ ಕೆಲ ಜನ ಈ ಮೊಬೈಲ್ ಅನ್ನುವ ಗೀಳಿನಿಂದ ಹೊರಬರಲು ತುಂಬಾ ಪ್ರಯತ್ನಿಸುತ್ತಿದ್ದಾರೆ. ಸ್ಕ್ರೀನ್ ಟೈಂ ಅನ್ನೋದು ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡುತ್ತಿದೆ ಎಂಬ ವಿಷಯದ ಬಗ್ಗೆ ಅರಿವಾಗಿದೆ. 

90ರ ದಶಕದಲ್ಲಿ ಬಂದ ಟೆಲಿಫೋನ್ ಗಳು ಕೇವಲ ಮಾತನಾಡಲು ಮಾತ್ರ ಬಳಸಲಾಗುತ್ತಿತ್ತು. ದೂರದ ಊರಿನಲ್ಲಿರುವವರ ಯೋಗಕ್ಷೇಮವನ್ನು ವಿಚಾರಿಸಲು ಬಳಸುತ್ತಿದ್ದ ದೂರವಾಣಿ ಕಾಲಕ್ಕೆ ತಕ್ಕಂತೆ ಹೊಸ ರೂಪಗಳ ಜೊತೆ ಇಡೀ ಪ್ರಪಂಚದ ಸುದ್ದಿಯನ್ನು ಹೊತ್ತು ತಂದು ಚಿಕ್ಕ ಪೆಟ್ಟಿಗೆಯಾಕಾರದಲ್ಲಿ 24 ಗಂಟೆ ವ್ಯಕ್ತಿಯ ಜೊತೆ ಇರುವಂತೆ ಆಗಿದೆ. ಮೊಬೈಲ್ ಫೋನ್, ಸ್ಮಾರ್ಟ್ ಫೋನ್, ಐ ಫೋನ್, ಟ್ಯಾಬ್ಲೆಟ್ ಹೀಗೆ ಹಲವಾರು ಬಗೆಯಲ್ಲಿ ನಮ್ಮನ್ನು ಆವರಿಸಿಕೊಂಡಿದೆ. ಟೆಕ್ನಾಲಜಿ ಬೆಳವಣಿಗೆಯಿಂದ ಈಗ ಕೇವಲ ಮಾತಲ್ಲ, ವಿಡಿಯೋ ಕಾಲ್, ಮೆಸೇಜ್, ಸುದ್ದಿ, ಮನರಂಜನೆ, ಕ್ರೀಡೆ, ವಿಶ್ವದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಸೆಕೆಂಡ್ ಗಳಲ್ಲೇ ತಿಳಿಯುವಂತಾಗಿದೆ. ಸರಿಯಾದ ಉಪಯೋಗಗಳಿಂದ ಮೊಬೈಲ್ ಫೋನ್ ಮನುಷ್ಯನಿಗೆ ಅತ್ಯವಶ್ಯಕ ವಸ್ತುವಾಗಿದೆ. ಆದರೆ, ಅದರಲ್ಲಿ ಹೆಚ್ಚು ಕಾಲ ಕಳೆಯುತ್ತಿರುವುದು ವಿಪರ್ಯಾಸವೂ ಆಗಿದೆ.

ಯಾವುದೇ ಆಗಲಿ ಅತಿಯಾದರೆ ವಿಷವಾಗುತ್ತೆ ಎನ್ನುವ ಮಾತು ನೂರಕ್ಕೆ ನೂರು ಸತ್ಯ. ಅತಿಯಾದ ಮೊಬೈಲ್ ಫೋನ್ ಬಳಕೆಯಿಂದ ಜನರು ತಮ್ಮ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಸುಮ್ಮನೆ ಸ್ಕ್ರೀನ್ ನೋಡುತ್ತಾ ಎಷ್ಟೋ ಸಮಯ ವ್ಯರ್ಥ ಮಾಡಿಕೊಳ್ಳುತ್ತಿರುವ ಜೊತೆಗೆ ಆರೋಗ್ಯದ ಮೇಲೆ ದುಷ್ಪರಿಣಾಮವಾಗುವಂತೆ ಮಾಡಿಕೊಳ್ಳುತ್ತಿದ್ದಾರೆ. ಕುಟುಂಬಕ್ಕಾಗಿ ಸಮಯ ಮೀಸಲು (family time), ವ್ಯಾಯಾಮ, ಯೋಗ, ನೆರೆಹೊರೆಯವರು-ಸ್ನೇಹಿತರ ಜೊತೆ ಮುಖಾಮುಖಿ ಮಾತು ಸೇರಿದಂತೆ ಎಷ್ಟೋ ವಿಷಯಗಳಿಂದ ದೂರ ಉಳಿಯುತ್ತಿದ್ದಾರೆ. 

ಈ ಪ್ರಭಾವಗಳು ಕಳೆದ 10 ವರ್ಷಗಳಿಂದ ಹೆಚ್ಚಾಗುತ್ತಲೇ ಇದೆ. ಆದರೆ ಕಳೆದ ಒಂದು ವರ್ಷದಿಂದ ಕೆಲ ಜನ ಮೊಬೈಲ್ ಗೀಳಿನಿಂದ ಹೊರ ಬರಲು ತುಂಬಾ ಪ್ರಯತ್ನ ಪಡುತ್ತಿರುವ ಸಂಗತಿ ಹೊರ ಬಿದ್ದಿದೆ. ಹೌದು, ಸ್ಕ್ರೀನ್ ಟೈಂ ಅನ್ನು ದೂರ ಮಾಡಲು ಕೆಲವರು ಅದ್ಭುತವಾದ ಪ್ರಯತ್ನಗಳನ್ನು ಕಂಡುಕೊಂಡಿದ್ದಾರೆ. ಮೊಬೈಲ್ ಫೋನ್ ಹತ್ತಿರವಿದ್ದಷ್ಟು ಅದನ್ನು ನೋಡಬೇಕೆಂಬ ಹಂಬಲ ಇದ್ದೇ ಇರುತ್ತದೆ. ಬೇಡ ಅನ್ನುವ ಕೆಲಸಗಳು ಹೆಚ್ಚಾಗಿ ಗಮನಸೆಳೆಯುವುದು ಸಾಮಾನ್ಯ. ಆದರೆ, ಮನಸ್ಸಿಟ್ಟು ಮಾರ್ಗ ಕಂಡುಕೊಂಡರೆ ಸರಿಯಾದ ದಾರಿ ಆಯ್ಕೆ ಕಂಡಿತ. ಮೊಬೈಲ್ ಅನ್ನು ನಾವಾಗಿಯೇ ಸ್ವಿಚ್ಡ್ ಆಫ್ ಮಾಡಲ್ಲ, ಮಾಡಿದರೂ ಯಾರಾದರೂ ಕಾಲ್ ಮಾಡಿರ್ತಾರೆ, ಅಪ್ಡೇಟ್ ಏನಿದೆ ಎಂಬ ಹಂಬಲ ಹೆಚ್ಚಾಗುತ್ತಿರುತ್ತದೆ. ಈ ಹಂಬಲಕ್ಕೆ ಕಾರಣ ನಾವು ಮೊಬೈಲ್ ಫೋನ್ ಆನ್ ಮಾಡಬಹುದು ಎಂಬ ಸತ್ಯ ಗೊತ್ತಿರುವುದರಿಂದ. ಆದರೆ, ಮೊಬೈಲ್ ಹಾಳಾದಾಗ, ನೆಟ್ ವರ್ಕ್ ಸಮಸ್ಯೆ ಇದ್ದಾಗ ನಾವಾಗಿಯೇ ಮೊಬೈಲ್ ಅನ್ನು ಮುಟ್ಟುವುದು ಕಡಿಮೆ ಮಾಡುತ್ತೇವೆ. ಅದರಂತೆ ಜನ ಈಗ ಮೊಬೈಲ್ ಫೋನ್ ಮುಟ್ಟದಂತೆ ನೋಡಿಕೊಳ್ಳಲು ದೂರ ಊರುಗಳು ಅಂದರೆ ನೆಟ್ ವರ್ಕ್ ಸಿಗದೆ ಸ್ಥಳಗಳಿಗೆ ಪ್ರವಾಸ ಕೈಗೊಳ್ಳುತ್ತಿದ್ದಾರೆ. ರಜೆ ಇದ್ದಾಗ, ಖಾಲಿ ಸಮಯವಿದ್ದಾಗ ಜನರು ನೆಟ್ ವರ್ಕ್ ಸಮಸ್ಯೆಗಳಿರೋ ಜಾಗಗಳಿಗೆ ಹೋಗಿ ಪ್ರಕೃತಿ ಸೌಂದರ್ಯ ಸವಿಯಲು ಮುಂದಾಗುತ್ತಿದ್ದಾರೆ.

ಸಾಮಾನ್ಯವಾಗಿ ನೆಟ್ ವರ್ಕ್ ಸಿಗದೆ ಜಾಗಗಳು ಅರಣ್ಯ ಪ್ರದೇಶಗಳು, ಬೆಟ್ಟಗುಡ್ಡಗಳೇ ಆಗಿವೆ. ಅದರಂತೆ ಪ್ರಕೃತಿ ಸೊಬಗಲ್ಲಿರುವ ರೆಸಾರ್ಟ್, ಹೋಂಸ್ಟೇ, ರೂಂಗಳ ಮೊರೆ ಹೋಗುತ್ತಿದ್ದಾರೆ. ಅದರ ಜೊತೆಗೆ ಟ್ರೆಕ್ಕಿಂಗ್, ಫಾಲ್ಸ್, ದೇವಸ್ಥಾನಗಳು ಇರುವ ಸ್ಥಳಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದೊಂದು ಅದ್ಭುತ ಅವಕಾಶದಿಂದ ಕೈಗಳಲ್ಲಿ ಮೊಬೈಲ್ ಗಳು ಹಿಡಿದುಕೊಳ್ಳದೇ ಪ್ರಕೃತಿಯ ಸೌಂದರ್ಯದಲ್ಲಿ ಸೋತು ಹೋಗುತ್ತಾ ತಮ್ಮ ಒತ್ತಡದ ಜೀವನವನ್ನು ಶಾಂತ ಮಾಡಿಕೊಳ್ಳುತ್ತಿದ್ದಾರೆ. 

ಇನ್ನೊಂದು ಮುಖ್ಯವಾದ ಅಂಶವೆಂದರೆ, ಐಟಿಬಿಟಿ ಉದ್ಯೋಗಿಗಳೇ ಹೆಚ್ಚಾಗಿ ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಯಾಕೆಂದರೆ ಪ್ರತಿ ದಿನ ಸಿಸ್ಟಮ್, ಮೇಲ್ (mail), ವರ್ಕ್ ಲೋಡ್ (work load), ಟಾರ್ಗೆಟ್ (target) ಎಂಬ ಒತ್ತಡದಲ್ಲಿ ಕೆಲಸ ಮಾಡುತ್ತಿರುತ್ತಾರೆ. ಕೆಲವೊಮ್ಮ ವಾರಾಂತ್ಯದಲ್ಲಿ ಮನೆಯಲ್ಲಿದ್ದರೂ ಕೆಲಸವನ್ನು ಮಾಡುವ ಪರಿಸ್ಥಿತಿ ಎದುರಾಗಿರುತ್ತದೆ. ಮನೆಯಲ್ಲಿದ್ದರೆ ಆ ಕೆಲಸ ಮಾಡಲೇಬೇಕಾದ ಪ್ರಮೇಯ ಇರುತ್ತದೆ. ಅದೇ ವಾರಾಂತ್ಯದ 2 ದಿನ ನೆಟ್ ವರ್ಕ್ ಇಲ್ಲದ ಜಾಗಕ್ಕೆ ಬಂದರೆ ಆಫೀಸ್ ತಲೆಬಿಸಿನೇ ಇರುವುದಿಲ್ಲ ಎಂಬ ಯೋಚನೆ ಮಾಡುತ್ತಿದ್ದಾರೆ.  

ನಿಜಕ್ಕೂ ನೆಮ್ಮದಿಗಾಗಿ ತಂತ್ರಜ್ಞಾನವನ್ನು ದೂರವಿಡುವಂತ ಪರಿಸ್ಥಿತಿ ಎದುರಾಗಿರುವುದು ವಿಪರ್ಯಾಸವೇ ಸರಿ. ನೀವು ಮೊಬೈಲ್ ಗೀಳಿನಲ್ಲಿದ್ದರೆ ನಿಮಗಾಗಿ, ನಿಮ್ಮವರಿಗಾಗಿ ನೆಟ್ ವರ್ಕ್ ಇಲ್ಲದ ಜಾಗಗಳನ್ನು ಆಯ್ಕೆ ಮಾಡಿ ಸಮಯ ಕಳೆಯಿರಿ.


#mobile phone addiction #escape #People are leaving town #ಮೊಬೈಲ್ ಗೀಳು# ಹೊರಬರುವಿಕೆ#ಊರು ಬಿಡುತ್ತಿರುವ ಜನರು

Leave a Reply

Your email address will not be published. Required fields are marked *

  • Facebook
  • X (Twitter)
  • LinkedIn
  • More Networks
Copy link