ಶರ್ಮಿಳಾ ಧಂಕರ್


ಗ್ಲ್ಯಾಸ್ಗೋದಲ್ಲಿ ನಡೆದ ಮಹಿಳೆಯರ ಶಾಟ್‌ಪುಟ್ F57 ಸ್ಪರ್ಧೆಯಲ್ಲಿ 9.81 ಮೀಟರ್‌ ಎಸೆತದೊಂದಿಗೆ ಅಗ್ರಸ್ಥಾನವನ್ನು ಪಡೆದುಕೊಂಡರು. ಅವರ ಈ ಗಮನಾರ್ಹ ಸಾಧನೆಯು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪ್ಯಾರಾ ಅಥ್ಲೆಟಿಕ್ಸ್ ಪದಕಕ್ಕಾಗಿ ಭಾರತದ 20 ವರ್ಷಗಳ ಕಾಯುವಿಕೆಯನ್ನು ಕೊನೆಗೊಂಡಿತು.

ಕರ್ನಾಟಕದ ಕೆಎಸ್ ಶಿಲ್ಪಾ

2026 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಶರ್ಮಿಳಾ ಧಂಕರ್ ಹೊಸ ಇತಿಹಾಸ ಬರೆದಿದ್ದಾರೆ. ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಪ್ಯಾರಾ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗ್ಲ್ಯಾಸ್ಗೋದಲ್ಲಿ ನಡೆದ ಮಹಿಳೆಯರ ಶಾಟ್‌ಪುಟ್ F57 ಸ್ಪರ್ಧೆಯಲ್ಲಿ 9.81 ಮೀಟರ್‌ ಎಸೆತದೊಂದಿಗೆ ಅಗ್ರಸ್ಥಾನವನ್ನು ಪಡೆದುಕೊಂಡರು. ಅವರ ಈ ಗಮನಾರ್ಹ ಸಾಧನೆಯು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪ್ಯಾರಾ ಅಥ್ಲೆಟಿಕ್ಸ್ ಪದಕಕ್ಕಾಗಿ ಭಾರತದ 20 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿತು.ಅಲ್ಲದೇ ಶರ್ಮಿಳಾ ಭಾರತದಲ್ಲಿ ಕಷ್ಟಗಳನ್ನು ಅನುಭವಿಸುತ್ತಿರುವ ಅದೆಷ್ಟೋ ಮಹಿಳೆಯರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ.

ಎರಡು ವರ್ಷದ ವಯಸ್ಸಿನಲ್ಲೇ ಪೋಲಿಯೊಗೆ ತುತ್ತಾಗಿದ್ದ ಹರಿಯಾಣದ ಶರ್ಮಿಳಾ ಧಂಕರ್‌ ಅವರ ಬಾಲ್ಯವೇ ಸವಾಲುಗಳಿಂದ ಕೂಡಿತ್ತು. 19ನೇ ವಯಸ್ಸಿನಲ್ಲಿ ವಿವಾಹವಾದ ಅವರು, ಕೌಟುಂಬಿಕ ಹಿಂಸೆ ಮತ್ತು ದೌರ್ಜನ್ಯದಿಂದ ಕೂಡಿದ ದಾಂಪತ್ಯ ಜೀವನವನ್ನು ಅನುಭವಿಸಿದರು. ಕೊನೆಗೆ 26ನೇ ವಯಸ್ಸಿನಲ್ಲಿ ಇಬ್ಬರು ಪುಟ್ಟ ಹೆಣ್ಣುಮಕ್ಕಳೊಂದಿಗೆ ಆ ಸಂಬಂಧದಿಂದ ಹೊರಬರಬೇಕಾದ ಪರಿಸ್ಥಿತಿ ಎದುರಾಯಿತು.

ಕೆಲವು ವರ್ಷಗಳ ಬಳಿಕ ಅಜಿತ್ ಸಿಂಗ್ ಅವರನ್ನು ವಿವಾಹವಾದರು. ಇಬ್ಬರೂ ಸೇರಿ ಹೊಸ ಬದುಕನ್ನು ಕಟ್ಟಲಾರಂಭಿಸಿದರು. ಶರ್ಮಿಳಾ ಅವರ ಕ್ರೀಡಾ ಕನಸನ್ನು ನನಸಾಗಿಸಲು ಅಜಿತ್ ತಮ್ಮ ಆಸ್ತಿಯನ್ನೇ ಮಾರಾಟ ಮಾಡಿ ಬೆಂಬಲ ನೀಡಿದರು. ಹಾಗಂತ ಅಜಿತ್‌ ಶ್ರೀಮಂತಲ್ಲ. ಆತನೂ ಕೂಲಿ ಕೆಲಸ ಮಾಡುವವ. ಆದರೆ ಹೃದಯದಲ್ಲಿ ಶ್ರೀಮಂತಿಕೆ ಮನೆ ಮಾಡಿತ್ತು. ಇಬ್ಬರು ಮಕ್ಕಳ ತಾಯಿಯನ್ನು ಮದುವೆಯಾದ ಎಂದು ಜನರು ನಿಂದನೆಯ ಮಾತುಗಳನ್ನಾಡಿದರೂ ಲೆಕ್ಕಿಸದೆ ಬದುಕಿದರು. ಅದೇ ಅವರ ಬದುಕಿನ ಮಹತ್ವದ ತಿರುವಾಯಿತು. 

ಕೆಲವೇ ವರ್ಷಗಳಲ್ಲಿ ಶರ್ಮಿಳಾ ಭಾರತೀಯ ಪ್ಯಾರಾ ಅಥ್ಲೆಟಿಕ್ಸ್ ತಂಡದ ಪ್ರಮುಖ ಸದಸ್ಯೆಯಾದರು. ಅಥ್ಲೆಟಿಕ್ಸ್ ಮುಖ್ಯ ಕೋಚ್ ಕರ್ನಾಟಕದ  ಸತ್ಯನಾರಾಯಣ ಅವರಲ್ಲಿ ಪಳಗಿದ ಶರ್ಮಿಳಾ ಅತ್ಯಂತ ಆತ್ಮವಿಶ್ವಾಸದೊಂದಿಗೆ ಗ್ಲಾಸ್ಗೋಗೆ ತೆರಳಿದ್ದರು. ಶರ್ಮಿಳಾ ಅವರ ಯಶಸ್ಸಿನ ಬಗ್ಗೆ ಮಾತನಾಡಿದ ಸತ್ಯನಾರಾಯಣ,”ಇದು ಸಿನಿಮಾ ಕತೆಯಲ್ಲಿ ನನ್ನ ಕಣ್ಣೆದುರೇ ಕಂಡ ಸತ್ಯ ಕತೆ, ಶರ್ಮಿಳಾ ಅವರ ಪರಿಶ್ರಮಕ್ಕೆ ನಾನು ಯಾವಾಗಲೂ ಬೆಂಬಲ ನೀಡಿದ್ದೇನೆ. ಅವರ ಅವರ ಯಶಸ್ಸಿನ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಅವರು ಚಿನ್ನ ಗೆದ್ದಿರುವುದು ಶಾಟ್‌ಪಟ್‌ನಲ್ಲಿ ಆದರೆ ಅವರು ಬದುಕಿನ ಹರ್ಡಲ್ಸ್‌ನಲ್ಲಿ ಚಿನ್ನ ಗೆದ್ದಿದ್ದಾರೆ. ಇದು ಬರೇ ಚಿನ್ನದ ಪದಕವಲ್ಲ, ಇದು ಬದುಕನ್ನೇ ಗೆದ್ದ ಪದಕ ಎಂದಿದ್ದಾರೆ. 

ಮತ್ತೊಂದೆಡೆ ಕರ್ನಾಟಕದ ಹೆಮ್ಮೆಯ ಪ್ಯಾರಾ ಅಥ್ಲೀಟ್ ಕೆಎಸ್ ಶಿಲ್ಪಾ ಅವರು, ಕಾಮನ್ ವೇಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದಿದ್ದು, ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸೇರಿದಂತೆ ಹಲವು ಗಣ್ಯರು ಅಭಿನಂದಿಸಿದ್ದಾರೆ. 

#Commonwealth Games 2026 #SharmilaDhankar #winsgold #ksshilpa #ಕಾಮನ್ ವೆಲ್ತ್ ಗೇಮ್ಸ್ 2026 #ಶರ್ಮಿಳಾ ಧಂಕರ್ #ಚಿನ್ನದಪದಕ #ಕೆಎಸ್ ಶಿಲ್ಪಾ

Leave a Reply

Your email address will not be published. Required fields are marked *

  • Facebook
  • X (Twitter)
  • LinkedIn
  • More Networks
Copy link