ದರ್ಶನ್


ಪ್ರಕರಣದ ಎರಡನೇ ಆರೋಪಿ ಎಂದು ಗುರುತಿಸಲಾಗಿರುವ ನಟ ದರ್ಶನ್ ಪರವಾಗಿ ಹಿರಿಯ ವಕೀಲರಾದ ಮುಕುಲ್ ರೋಹ್ಟಗಿ ಅವರು ನ್ಯಾಯಪೀಠದ ಮುಂದೆ ಸುದೀರ್ಘ ವಾದ ಮಂಡಿಸಿದರು. 

ನಟ ದರ್ಶನ್

ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸುತ್ತಿರುವ ನಟ ದರ್ಶನ್ ಸಲ್ಲಿಸಿರುವ ಹೊಸ ಜಾಮೀನು ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು  ನಡೆಸಿದೆ. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ವಿಜಯ್ ಬಿಷ್ನೋಯಿ ಅವರನ್ನೊಳಗೊಂಡ ಪೀಠವು,ಪ್ರಕರಣದ ಪ್ರಗತಿಯ ಬಗ್ಗೆ ಸಮಗ್ರ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ಪ್ರಕರಣದ ಎರಡನೇ ಆರೋಪಿ ಎಂದು ಗುರುತಿಸಲಾಗಿರುವ ನಟ ದರ್ಶನ್ ಪರವಾಗಿ ಹಿರಿಯ ವಕೀಲರಾದ ಮುಕುಲ್ ರೋಹ್ಟಗಿ ಅವರು ನ್ಯಾಯಪೀಠದ ಮುಂದೆ ಸುದೀರ್ಘ ವಾದ ಮಂಡಿಸಿದರು. ವಿಚಾರಣೆಯ ಸಮಯದಲ್ಲಿ ಅವರು ಜೈಲಿನಲ್ಲಿ ದರ್ಶನ್ ಅವರಿಗೆ ನೀಡಲಾಗುತ್ತಿರುವ ಸೌಲಭ್ಯಗಳ ಬಗ್ಗೆ ಪ್ರಸ್ತಾಪಿಸಿ ಆಕ್ಷೇಪ ವ್ಯಕ್ತಪಡಿಸಿದರು. ಈ ಹಿಂದೆ ಆರೋಪಿಗೆ ಯಾವುದೇ ವಿಶೇಷ ಸೌಲಭ್ಯಗಳನ್ನು ನೀಡದಂತೆ ಸೂಚಿಸಲಾಗಿತ್ತು ಆದರೆ ಪ್ರಸ್ತುತ ಜೈಲು ಅಧಿಕಾರಿಗಳು ಅವರಿಗೆ ಕನಿಷ್ಠ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಸಹ ನೀಡುತ್ತಿಲ್ಲ ಎಂದು ವಾದ ಮಂಡಿಸಿದರು. 

ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು ಜೈಲಿನಲ್ಲಿ ಆರೋಪಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಸ್ಪಷ್ಟನೆ ಕೋರಿದೆ.ಇದರೊಂದಿಗೆ ಐವತ್ತೇಳನೇ ಸಿಸಿಎಚ್ ನ್ಯಾಯಾಲಯದಿಂದ ಪ್ರಕರಣದ ಪ್ರಗತಿಯ ಬಗ್ಗೆ ಸುಪ್ರೀಂ ಕೋರ್ಟ್ ವರದಿಯನ್ನು ಕೇಳಿದೆ. 

ಇಲ್ಲಿಯವರೆಗೂ ಈ ಪ್ರಕರಣದಲ್ಲಿ ಒಟ್ಟು ಎಷ್ಟು ಸಾಕ್ಷಿಗಳ ವಿಚಾರಣೆ ನಡೆದಿದೆ ಮತ್ತು ಇನ್ನು ಎಷ್ಟು ಸಾಕ್ಷಿಗಳ ವಿಚಾರಣೆ ಬಾಕಿ ಇದೆ ಎಂಬ ವಿವರಗಳನ್ನು ನೀಡುವಂತೆ ಸೂಚಿಸಿದೆ. ಸಾಕ್ಷಿಗಳ ವಿಚಾರಣಾ ಪ್ರಕ್ರಿಯೆಯು ಪೂರ್ಣಗೊಳ್ಳಲು ಅಂದಾಜು ಎಷ್ಟು ಸಮಯ ಬೇಕಾಗಬಹುದು ಎಂಬ ಬಗ್ಗೆಯೂ ಮಾಹಿತಿಯನ್ನು ಒದಗಿಸಲು ಒಂದು ವಾರ ಕಾಲಾವಕಾಶ ನೀಡಲಾಗಿದೆ. ಈ ವರದಿಯ ಆಧಾರದ ಮೇಲೆ ದರ್ಶನ್ ಅವರ ಜಾಮೀನು ಅರ್ಜಿಯ ಭವಿಷ್ಯ ನಿರ್ಧಾರವಾಗಲಿದೆ.

#Renukaswamy #Murdercase #actorDarshan #supremecourt #stategovt #ರೇಣುಕಾಸ್ವಾಮಿ #ಕೊಲೆ ಪ್ರಕರಣ #ನಟ ದರ್ಶನ್ #ಸುಪ್ರೀಂಕೋರ್ಟ್ #ರಾಜ್ಯ ಸರ್ಕಾರ

Leave a Reply

Your email address will not be published. Required fields are marked *