ಚುನಾವಣಾ ಆಯೋಗದ ಕೇಂದ್ರ ಕಚೇರಿಯತ್ತ ತೆರಳುತ್ತಿದ್ದ ಇಂಡಿಯಾ ಒಕ್ಕೂಟದ ಸಂಸದರನ್ನು ಸಂಸತ್ ರಸ್ತೆಯಲ್ಲಿ ಪೊಲೀಸರು ತಡೆದರು.

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತರ (CEC) ರಾಜೀನಾಮೆಗೆ ಆಗ್ರಹಿಸಿ ಚುನಾವಣಾ ಆಯೋಗದ ಪ್ರಧಾನ ಕಚೇರಿಯನ್ನು ಮುತ್ತಿಗೆ ಹಾಕಲು ಯತ್ನಿಸಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿ ‘ಇಂಡಿಯಾ’ (INDIA) ಒಕ್ಕೂಟದ ಪ್ರಮುಖ ಸಂಸದರನ್ನು ದೆಹಲಿ ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ.

ಚುನಾವಣಾ ಆಯೋಗದ ಕೇಂದ್ರ ಕಚೇರಿಯತ್ತ ತೆರಳುತ್ತಿದ್ದ ಇಂಡಿಯಾ ಒಕ್ಕೂಟದ ಸಂಸದರನ್ನು ಸಂಸತ್ ರಸ್ತೆಯಲ್ಲಿ ಪೊಲೀಸರು ತಡೆದರು. ಬಳಿಕ ಸಂಸದರು ರಸ್ತೆಯಲ್ಲೇ ಧರಣಿ ಕುಳಿತು ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿದರು.

ಇದಕ್ಕೂ ಮುನ್ನ ಭದ್ರತಾ ಸಿಬ್ಬಂದಿ ಮೆರವಣಿಗೆಯನ್ನು ತಡೆದಾಗ ರಾಹುಲ್ ಗಾಂಧಿ ಮತ್ತು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಪೊಲೀಸ್ ಬ್ಯಾರಿಕೇಡ್ ಮೇಲೆ ಹತ್ತಿದ್ದರು. ರಾಜ್ಯಸಭೆ ಮತ್ತು ಲೋಕಸಭೆಯ ಪ್ರತಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಸೇರಿದಂತೆ INDIA ಒಕ್ಕೂಟದ ಸಂಸದರು ಸಂಸತ್ ಭವನದ ಆವರಣದಿಂದ ಚುನಾವಣಾ ಆಯೋಗದತ್ತ ಮೆರವಣಿಗೆ ಆರಂಭಿಸಿದ್ದರು. ಆದರೆ, ಸಂಸತ್ ಸ್ಟ್ರೀಟ್‌ನಲ್ಲಿ ಪೊಲೀಸರು ಅವರನ್ನು ತಡೆದರು.

ನೀತಿ ಆಯೋಗದ ಕಚೇರಿ ಮತ್ತು ಆಕಾಶವಾಣಿ ಭವನದ ನಡುವಿನ ರಸ್ತೆಯಲ್ಲಿ, ಚುನಾವಣಾ ಆಯೋಗದ ಕಚೇರಿ ಕಡೆಗೆ ಸಾಗುವ ಮಾರ್ಗದಲ್ಲಿ ಸಂಸದರನ್ನು ತಡೆಯಲಾಯಿತು. ಮುಂದೆ ಸಾಗಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಅವರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರು ಜ್ಞಾನೇಶ್ ಕುಮಾರ್ ಅವರನ್ನು ಆರ್‌ಎಸ್‌ಎಸ್ ಸಮವಸ್ತ್ರದಲ್ಲಿ ಚಿತ್ರಿಸಿರುವ ಕಟೌಟ್‌ಗಳನ್ನು ಪ್ರದರ್ಶಿಸಿದರು. ಬಿಜೆಪಿ ಹೈ, ಸಿಇಸಿ ಹೈ”, “ವೋಟ್ ಚೋರ್, ಗದ್ದಿ ಛೋಡ್” ಹಾಗೂ “ಪ್ರಜಾಪ್ರಭುತ್ವ ಮಾರಾಟಕ್ಕಿಲ್ಲ” ಎಂಬ ಘೋಷಣೆಗಳನ್ನು ಕೂಗಿದರು.

ರಾಹುಲ್ ಗಾಂಧಿ ತಮ್ಮ ಎಕ್ಸ್ ಖಾತೆಯಲ್ಲಿ, “ಜ್ಞಾನೇಶ್ ನಿಮ್ಮ ಸಮಯ ಮುಗಿದಿದೆ ಸಹೋದರ. ರಾಜೀನಾಮೆ ನೀಡುವ ಸಮಯ ಬಂದಿದೆ” ಎಂದು ಪೋಸ್ಟ್ ಮಾಡಿದ್ದಾರೆ.

ಟಿಎಂಸಿ ನಾಯಕರಾದ ಅಭಿಷೇಕ್ ಬ್ಯಾನರ್ಜಿ, ಡೆರೆಕ್ ಓಬ್ರಿಯಾನ್, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹಾಗೂ ಸಿಪಿಐ(ಎಂ) ನಾಯಕ ಜಾನ್ ಬ್ರಿಟ್ಟಾಸ್ ಸೇರಿದಂತೆ ಹಲವು ನಾಯಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಮೆರವಣಿಗೆ ಹಿನ್ನೆಲೆಯಲ್ಲಿ ಸಂಸತ್ ಭವನ ಮತ್ತು ಚುನಾವಣಾ ಆಯೋಗದ ಕಚೇರಿ ಸುತ್ತಮುತ್ತ ಭಾರಿ ಭದ್ರತೆ ಹಾಗೂ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಸಂಸದರು ಆಗಮಿಸುವುದಕ್ಕೂ ಮುನ್ನವೇ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

#Newdelhi #Rahulgandhi #Priyanka #Detained #ನವದೆಹಲಿ#ರಾಹುಲ್ ಗಾಂಧಿ#ಪ್ರಿಯಾಂಕಾಗಾಂಧಿ #ಬಂಧನ

Leave a Reply

Your email address will not be published. Required fields are marked *

  • Facebook
  • X (Twitter)
  • LinkedIn
  • More Networks
Copy link