ನಯನಾ ಮೋಟಮ್ಮ


ತಾವು ಹೇಳಿದಂತೆ ಇಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ವಿಧಾನಸೌಧದ ಸ್ಪೀಕರ್ ಕಚೇರಿಗೆ ತೆರಳಿದ್ದರು. ಆದರೆ, ಸ್ಪೀಕರ್ ಇಲ್ಲದಿದ್ದರಿಂದ ಅವರ ಆಪ್ತ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ನೀಡಿದ್ದಾರೆ. ಇನ್ನು ಸ್ಪೀಕರ್ ಭೇಟಿಗೆ ನಾಳೆ ಕಾಲಾವಕಾಶ ಸಿಕ್ಕಿರುವುದರಿಂದ ನಾಳೆಯೇ ಸ್ಪೀಕರ್ ಗೆ ರಾಜಿನಾಮೆ ಪತ್ರ ನೀಡುವ ಸಾಧ್ಯತೆ ಇದೆ.

ಬೆಂಗಳೂರು: ಕಾಡಾನೆಗಳ ಸ್ಥಳಾಂತರ ಕುರಿತಂತೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಇದೀಗ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಹಾಸನದಲ್ಲಿ ಕಾಡಾನೆಗಳ ದಾಳಿಗಳ ಬಳಿಕ ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಆನೆಗಳ ಸ್ಥಳಾಂತರಕ್ಕೆ ಮುಂದಾಗಿದ್ದ ಸರ್ಕಾರ ಹಾಸನದಿಂದ ಭದ್ರಾ ಅಭಯಾರಣ್ಯಕ್ಕೆ ರಾತ್ರೋರಾತ್ರಿ ಓಡಿಸಿತ್ತು. ಆದರೆ ಇದಕ್ಕೆ ಚಿಕ್ಕಮಗಳೂರು ಜಿಲ್ಲೆಯ ಶಾಸಕರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಈಗಾಗಲೇ ಸ್ಥಳಾಂತರ ಮಾಡಲಾಗಿರುವ ಆನೆಗಳನ್ನು ವಾಪಸ್ ಓಡಿಸಿಕೊಂಡು ಹೋಗಬೇಕು ಇಲ್ಲವಾದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ನಯನಾ ಮೋಟಮ್ಮ ಬಹಿರಂಗವಾಗಿಯೇ ಹೇಳಿದ್ದರು. ನನಗೆ ಸರ್ಕಾರ ಮುಖ್ಯ ಅಲ್ಲ, ನನ್ನ ಜನ ಮುಖ್ಯ ಎಂದು ಹೇಳಿದ್ದರು.

ತಾವು ಹೇಳಿದಂತೆ ಇಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ವಿಧಾನಸೌಧದ ಸ್ಪೀಕರ್ ಕಚೇರಿಗೆ ತೆರಳಿದ್ದರು. ಆದರೆ, ಸ್ಪೀಕರ್ ಇಲ್ಲದಿದ್ದರಿಂದ ಅವರ ಆಪ್ತ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ನೀಡಿದ್ದಾರೆ. ಇನ್ನು ಸ್ಪೀಕರ್ ಭೇಟಿಗೆ ನಾಳೆ ಕಾಲಾವಕಾಶ ಸಿಕ್ಕಿರುವುದರಿಂದ ನಾಳೆಯೇ ಸ್ಪೀಕರ್ ಗೆ ರಾಜಿನಾಮೆ ಪತ್ರ ನೀಡುವ ಸಾಧ್ಯತೆ ಇದೆ.

ರಾಜೀನಾಮೆ ಪತ್ರದಲ್ಲಿ ಏನಿದೆ? ಮೂಡಿಗೆರೆ ಶಾಸಕಿಯಾಗಿ ಈ ಮೂಲಕ ನನ್ನ ಶಾಸಕಿ ಸ್ಥಾನಕ್ಕೆ ಸ್ವಯಂಪ್ರೇರಿತವಾಗಿ, ಆದರೆ ಅತ್ಯಂತ ನೋವು ಹಾಗೂ ಆಸಮಾಧಾನದಿಂದ ರಾಜೀನಾಮೆಯನ್ನು ಸಲ್ಲಿಸುತ್ತಿದ್ದೇನೆ. ನನ್ನ ಈ ನಿರ್ಧಾರಕ್ಕೆ ಕಾರಣವಾದ ಗಂಭೀರ ಪರಿಸ್ಥಿತಿಯನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ.

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕು ವ್ಯಾಪ್ತಿಯಲ್ಲಿ ಬೀಡುಬಿಟ್ಟಿರುವ ಸುಮಾರು 50-60 ಕಾಡಾನೆಗಳ ಹಿಂಡನ್ನು ಚಿಕ್ಕಮಗಳೂರು ಜಿಲ್ಲೆಯ ಯಾವುದೇ ಶಾಸಕರ ಗಮನಕ್ಕೆ ತಾರದೆ ಮತ್ತು ಕ್ಷೇತ್ರದ ಜನಪ್ರತಿನಿಧಿಯಾದ ನನ್ನೊಂದಿಗೆ ಯಾವುದೇ ಸಮಾಲೋಚನೆ ನಡೆಸದೆ ಏಕಾಏಕಿ ನನ್ನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ತಕ್ಕೋಳ ಮೀಸಲು ಆರಣ್ಯಕ್ಕೆ ಸ್ಥಳಾಂತರಿಸಲು (ಡ್ರೈವ್ ಮಾಡಲು) ಆರಣ್ಯ ಇಲಾಖೆಯು ಮುಂದಾಗಿರುವುದು ಅತ್ಯಂತ ಖಂಡನೀಯವಾಗಿದೆ.

ಈ ಹಿಂದೆ ಬೇಲೂರಿನಲ್ಲಿ ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟ ದುರದೃಷ್ಟಕರ ಘಟನೆಯ ನಂತರ, ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಲಿಂಗೇಗೌಡರ ಕೋರಿಕೆಯ ಮೇರೆಗೆ ಈ ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸಲು ಸಿದ್ಧತೆ ನಡೆಸಲಾಗಿತ್ತು. ಆದರೆ, ಆ ಸಂದರ್ಭದಲ್ಲೂ ಚಿಕ್ಕಮಗಳೂರು ಜಿಲ್ಲೆಯ ಒಬ್ಬನೆ ಒಬ್ಬ ಶಾಸಕರ ಅಭಿಪ್ರಾಯವನ್ನಾಗಲಿ, ಒಪ್ಪಿಗೆಯನ್ನಾಗಲಿ ಪಡೆಯುವ ಸೌಜನ್ಯವನ್ನು ಸರ್ಕಾರ ಅಥವಾ ಇಲಾಖೆ ತೋರಿಸಲಿಲ್ಲ.

ಭದ್ರಾ ಅಭಯಾರಣ್ಯಕ್ಕೆ ಆನೆಗಳನ್ನು ಬಿಡುವುದಕ್ಕೆ ತೀವ್ರ ಆಸಮಾಧಾನಕ್ಕೆ ಕಾರಣವಾದ ನಂತರ ಅದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ನನ್ನ ಕ್ಷೇತ್ರದ ಜನರು ಈಗಾಗಲೇ ವನ್ಯಜೀವಿಗಳ ಪಾವಳಿಯಿಂದ ತತ್ತರಿಸಿ ಹೋಗಿದ್ದಾರೆ. ಈ ಹಿಂದೆಯೂ ಕಾಡಾನೆ ಮತ್ತು ಕಾಡುಕೋಣಗಳ ದಾಳಿಯಿಂದ ಕ್ಷೇತ್ರದಲ್ಲಿ ಹಲವಾರು ಅಮಾಯಕ ಜೀವಗಳು ಬಲಿಯಾಗಿದೆ.

ಪ್ರಸ್ತುತ ಇಲ್ಲಿರುವ ಕಾಡಾನೆಗಳನ್ನೇ ಸಮರ್ಪಕವಾಗಿ ನಿಭಾಯಿಸಲು ಹಾಗೂ ಮಾನವ-ವನ್ಯಜೀವಿ ಸಂಘರ್ಷವನ್ನು ತಡೆಯಲು ಅರಣ್ಯ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎಂಬ ಗಂಭೀರ ಆರೋಪ ಸಾರ್ವಜನಿಕ ವಲಯದಲ್ಲಿದೆ. ಪರಿಸ್ಥಿತಿ ಹೀಗಿರುವಾಗ, ಹೊರಗಿನಿಂದ ಮತ್ತೆ 50-60 ಆನೆಗಳನ್ನು ತಂದು ಈ ಭಾಗಕ್ಕೆ ಬಿಡುವುದು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. 36 ಆನೆಗಳನ್ನು ಇಂದು ಬೆಳಗ್ಗಿನ ಜಾವ ಕಾರ್‌ಬೈಲ್ ವರೆಗೆ ಡ್ರೈವ್ ಮಾಡಲಾಗಿದೆ. ಇಂದು ರಾತ್ರಿ ವೇಳಗೆ ತಕ್ಕೊಳ ಅರಣ್ಯ ವ್ಯಾಪ್ತಿಗೆ ತಂದು ಬಿಡಲಾಗುತ್ತಿದೆ ಎಂಬ ಮಾಹಿತಿ ಇದೆ.

ಬೇಲೂರು ಭಾಗದಲ್ಲಿ ಇನ್ನೂ ಉಳಿದಿರುವ ಆನೆಗಳನ್ನು ತಕ್ಕೋಳ ಆರಣ್ಯ ಪ್ರದೇಶಕ್ಕೆ ತಂದು ಬಿಡುವ ಹುನ್ನಾರ ನಡೆಯುತ್ತಿದೆ ಒಂದೇರೆಡು ದಿನಗಳಲ್ಲಿ ಮೂಡಿಗೆರೆ ಕ್ಷೇತ್ರದ ವಿವಿದೆಡೆಗೆ ಆನೆಗಳು ಚದರಿ ಹೋಗುವ ಸಾಧ್ಯತೆ ಇರುವದರಿಂದ ಅಪಾರ ಪ್ರಮಾಣದಲ್ಲಿ ಕೃಷಿ ಭೂಮಿಗೆ ಅಪಾಯವಾಗುವ ಎಲ್ಲಾ ಸಾದ್ಯತೆಗಳ ಹೆಚ್ಚಾಗಿ ಇದೆ

ಬೇಲೂರಿನಿಂದ ತಕ್ಕೋಳ ಮೀಸಲು ಅರಣ್ಯಕ್ಕೆ ಆನೆಗಳು ಸಾಗಿಬರುವ ಮಾರ್ಗದಲ್ಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಣ್ಣ ಮತ್ತು ಮಧ್ಯಮ ರೈತರು ಕಷ್ಟಪಟ್ಟು ಬೆಳೆಸಿರುವ ಕಾಫಿ ತೋಟಗಳು, ಅಡಿಕೆ ತೋಟಗಳು ಹಾಗೂ ಭತ್ತ ಗದ್ದೆಗಳು ಸಂಪೂರ್ಣವಾಗಿ ನಾಶವಾಗುವ ಭೀತಿ ಎದುರಾಗಿದೆ. ಬೆಳೆ ನಷ್ಟದ ಜೊತೆಗೆ, ಇದರಿಂದಾಗಿ ಪ್ರವಾಸೋಧ್ಯಮವನ್ನೇ ನಂಬಿರುವ ಜನರಿಗು ಸಹ ಇದರಿಂದ ತೊಂದರೆಯಾಗುತ್ತದೆ. ಆನೆಗಳ ಹಿಂಡು ಜನವಸತಿ ಪ್ರದೇಶಗಳಿಗೆ ನುಗ್ಗಿ ಸಾರ್ವಜನಿಕ ಪ್ರಾಣಕ್ಕೆ ಕುತ್ತು ತರುವ ಅಪಾಯವೂ ದಟ್ಟವಾಗಿದೆ.

ಸರ್ಕಾರ ಮತ್ತು ಅರಣ್ಯ ಇಲಾಖೆಯ ಈ ಜನವಿರೋಧಿ ನಡೆಯನ್ನು ಶ್ರೀವವಾಗಿ ಖಂಡಿಸುತ್ತೇನೆ. ಆನೆಗಳನ್ನು ಓಡಿಸುವ ಕುರಿತು ಕೈಗೊಂಡಿರುವ ಈ ಏಕಪಕ್ಷೀಯ ನಿರ್ಣಯವು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದ್ದು ಇದನ್ನು ವಿರೋಧಿಸಿ ಕ್ಷೇತ್ರದ ಜನರ ಹಿತರಕ್ಷಣೆಗಾಗಿ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ದಯವಿಟ್ಟು ನನ್ನ ರಾಜಿನಾಮೆಯನ್ನು ತಕ್ಷಣವೇ ಅಂಗೀಕರಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕಳಕಳಿಯಿಂದ ವಿನಂತಿಸಿಕೊಳ್ಳುತ್ತೇನೆ ಎಂದು ಉಲ್ಲೇಖಿಸಲಾಗಿದೆ.

#nayanamotamma #congressmla #resignation

Leave a Reply

Your email address will not be published. Required fields are marked *

  • Facebook
  • X (Twitter)
  • LinkedIn
  • More Networks
Copy link